ಬೆಳಗಾವಿ ಸಾಹಿತಿಗಳು ಸಿಕ್ಕರೆ ತಿಳಿಸಿ
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಪಾಲಿಕೆ ನಿರ್ಣಯಕ್ಕೆ ವ್ಯಾಪಕ ಹೋರಾಟ ಒತ್ತಾಯ
ಬೆಳಗಾವಿ ಸಾಹಿತಿಗಳು ಸಿಕ್ಕರೆ ತಿಳಿಸಿ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡಪರ ನಿಲುವು, ಸ್ಪಂದನೆ, ಹೋರಾಟ, ಚಳವಳಿ ವಿಷಯ ಬಂದಾಗ ಇಲ್ಲಿಯ ಕನ್ನಡಪರ ಸಂಘಟನೆಗಳು ತಕ್ಷಣ ಎದ್ದುನಿಂತು ಕಣಕ್ಕಿಳಿಯುತ್ತವೆ. ಚನ್ನಮ್ಮ ವೃತ್ತಕ್ಕೆ ಜಮಾಯಿಸಿ ಒಕ್ಕೋರಲದ ಧ್ವನಿ ಮೊಳಗಿಸುತ್ತವೆ. ಬೃಹತ್ ಮೆರವಣಿಗೆ ನಡೆಸಿ, ಜನಪ್ರತಿನಿಧಿಗಳ ಮೇಲೆ ಒತ್ತಡ ತರುತ್ತವೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತವೆ. ತಡಮಾಡದೇ ಮುಖ್ಯಮಂತ್ರಿ ಒಳಗೊಂಡು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಮನವರಿಕೆ ಪರಿಹಾರಕ್ಕೆ ಆಗ್ರಹಿಸುತ್ತವೆ. ಯಾವುದೇ ಮುಜುಗರಕ್ಕೆ ಒಳಗಾಗದೆ ಇಲ್ಲಿಯ ರಾಜಕೀಯ ನಾಯಕರುಗಳನ್ನು ನೇರವಾಗಿ ಪ್ರಶ್ನಿಸುತ್ತಾರೆ. ಯಾವ ಆತಂಕವಿಲ್ಲದೆ ಮಾಧ್ಯಮಗಳ ಮುಂದೆ ವಸ್ತುಸ್ಥಿತಿ ತಿಳಿಸಿ ನಾಡಿನ ಗಮನ ಸೆಳೆಯುವಲ್ಲಿ, ಸರ್ಕಾರದ ಕಣ್ಣು ತೆರೆಸುವಲ್ಲಿ, ಸಾರ್ವಜನಿಕ ಆಡಳಿತ ವ್ಯವಸ್ಥೆ ಚುರುಕುಗೊಳಿಸುವಲ್ಲಿ ಯಶಸ್ಸು ಸಾಧಿಸುತ್ತಾರೆ.
ಇವರ ಹೋರಾಟದ ಕಿಚ್ಚು ದೂರದ ಬೆಂಗಳೂರಿಗೆ ಮುಟ್ಟಿದ ತಕ್ಷಣ ಅಲ್ಲಿಯ ಕನ್ನಡಪರ ಹೋರಾಟದ ನಾಯಕರುಗಳು ಬೆಳಗಾವಿಗೆ ಆಗಮಿಸಿ, ರಸ್ತೆ ತಡೆ ನಡೆಸುತ್ತಾರೆ, ಮುತ್ತಿಗೆ ಹಾಕಲು ಮುಂದಾಗುತ್ತಾರೆ. ಪೊಲೀಸ್ ವಶವಾಗುತ್ತಾರೆ.
ದಿವಂಗತರಾದ ಎಮ್.ಎಸ್. ಟೋಪಣ್ಣವರ, ಸಿದ್ದನಗೌಡ ಪಾಟೀಲ, ರಾಘವೇಂದ್ರ ಜೋಶಿಯಂಥ ಮಹನೀಯರ ನಂತರ ಗಡಿ ವಿಷಯ ಹಾಗೂ ಜಿಲ್ಲೆಯ ಕನ್ನಡಪರ ಸಮಸ್ಯೆ ಒಳಗೊಂಡಂತೆ ಯಾವುದೇ ಸಾರ್ವಜನಿಕ ಸಮಸ್ಯೆಗಳು ಎದುರಾದರೆ ಅಶೋಕ ಚಂದರಗಿ ಮಾತನಾಡುತ್ತಾರೆ. ಮಹಾದೇವ ತಳವಾರ ಸಂಕಟಪಟ್ಟು ಆಕ್ರೋಶಗೊಳ್ಳುತ್ತಾರೆ. ದೀಪಕ ಧ್ವನಿ ಎತ್ತುತ್ತಾರೆ. ಶ್ರೀನಿವಾಸ ತಾಳುಸ್ಕರ ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೀಗೆ ಕನ್ನಡಪರ ಸಂಘಟನೆಗಳ ನಾಯಕರು, ಕಾರ್ಯಕರ್ತರು ಸ್ವಾಭಿಮಾನದಿಂದ ಎಚ್ಚತ್ತಿಕೊಳ್ಳುತ್ತಾರೆ.ಗಡಿಯಲ್ಲಿ ಶೈಕ್ಷಣಿಕ ಸ್ಥಿತಿ, ಕನ್ನಡ ಶಾಲೆಗಳ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಧಾರಿಸಲು ಹೋರಾಟ ನಡೆಸಿದ್ದಾರೆ. ಈಗಲೂ ಗಡಿಯ ವಿಷಯದ ಬಗ್ಗೆ ಈ ಸಂಘಟನೆಗಳು ನಡೆಸುತ್ತಿರುವ ಹೋರಾಟ ಅನನ್ಯವಾಗಿದ್ದು, ನ್ಯಾಯಲಯದ ವಿಷಯ ಬಂದಾಗ ಇದೇ ಸಂಘಟನೆಗಳು ಸರ್ಕಾರವನ್ನು ನಿದ್ದೆ ಮಂಪರದಿಂದ ಎಚ್ಚರಿಸುತ್ತಿವೆ. ಗಡಿ ವಿಷಯದ ಬಗ್ಗೆ ಸರ್ಕಾರಕ್ಕೆ ಹಾಗೂ ಮಾಧ್ಯಮಗಳಿಗೆ ಸೂಕ್ತ ಮಾಹಿತಿ ನೀಡಿದ ಮತ್ತು ನೀಡುವ ವ್ಯಕ್ತಿ ಬೆಳಗಾವಿಯಲ್ಲಿ ಯಾರಾದರೂ ಇದ್ದರೆ ಅದು ಅಶೋಕ ಚಂದರಗಿ ಮಾತ್ರ!
ಪ್ರಸ್ತುತ "ಗಡಿ ಸಮಸ್ಯೆಗೆ ಮಹಾಜನ ವರದಿಯೇ ಅಂತಿಮ", " ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂದು ಬೆಳಗಾವಿ ಮಹಾನಗರ ಪಾಲಿಕೆ ನಿರ್ಣಯ ಕೈಗೊಳ್ಳಲೇಬೇಕು ಎಂದು ಕಳೆದ ಮಾರ್ಚದಿಂದ ಬೆಳಗಾವಿ ಕನ್ನಡಪರ ಸಂಘಟನೆಗಳು ಹೋರಾಟದ ಕಣಕ್ಕಿಳಿದಿವೆ. ನಾಡಿನ ಹಿರಿಯರಾದ ವಾಟಾಳಾ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಅನೇಕರು ಬೆಳಗಾವಿ ನೆಲಕ್ಕಿಳಿದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕನ್ನಡ ಪ್ರಾಚೀನ ಹಲ್ಮಿಡಿ ಶಾಸನ ಇಲ್ಲಿ ಪುನರ ಪ್ರತಿಷ್ಠಾಪಿಸಿ ಮೆರಗು ನೀಡಿದರು.ಪಾಲಿಕೆ ಸ್ಪಂದಿಸದಿದ್ದರೆ ಕರ್ನಾಟಕ ಬಂದ್ ಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದೆಲ್ಲ ಕನ್ನಡತ್ವಕ್ಕಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವಾಗ ದೀಮಂತ ಸಾಹಿತಿಗಳು ಎಲ್ಲಿದ್ದಾರೆ? ಎಂಬ ಪ್ರಶ್ನೆ ಎತ್ತುತ್ತಿದ್ದಂತೆ ದೂರದ ಬೆಂಗಳೂರಿನಲ್ಲಿ ಇರುವ ಹಿರಿಯ ಸಾಹಿತಿಗಳಾದ ಕೆ. ಮರಳಸಿದ್ಧಪ್ಪ, ಜಿ.ರಾಮಕೃಷ್ಣ, ಎಸ್.ಜಿ.ಸಿದ್ಧರಾಮಯ್ಯ, ವಿಜಯಾ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ, ಆರ್.ಜಿ. ಹಳ್ಳಿನಾಗರಾಜ್, ವಸುಂಧರಾ ಭೂಪತಿ ಅವರು ನಿರ್ಣಯಕ್ಕೆ ಒತ್ತಾಯಿಸಿ ಕಡಕ್ಕಾದ ಪತ್ರ ಬರೆದಿದ್ದಾರೆ.
ಇದೆಲ್ಲ ಬೆಳಗಾವಿಗಾಗಿ ನಡೆಯುತ್ತಿರುವಾಗ ಬೆಳಗಾವಿಯಲ್ಲಿನ ಸಾಹಿತಿಗಳೆನಿಸಿಕೊಂಡವರು ಎಲ್ಲಿದ್ದಾರೆ ಎಂದು ಕನ್ನಡಪರ ಯುವ ಸಮುದಾಯ ಖಾರವಾಗಿ ಪ್ರಶ್ನಿಸಿದ್ದಾರೆ. ಪ್ರಶಸ್ತಿ ಸನ್ಮಾನ ಕ್ಕಾಗಿ ಧ್ವನಿ ಎತ್ತುವ ಇವರು ಈಗೇಲಿದ್ದಾರೆ ಎಂದು ಕೇಳುತ್ತಿದ್ದಾರೆ. ಪ್ರಶಸ್ತಿಗಾಗಿ ಸ್ವಯಂ ಘೋಷಿತ ಪತ್ರಗಳನ್ನು ಹಿಡಿದು ದುಂಬಾಲು ಬೀಳುವ, ಜನಪರ - ಪ್ರಗತಿಪರ ಎಂದು ಹೇಳಿಕೊಳ್ಳುವ, ಕಿತ್ತೂರು ಚೆನ್ನಮ್ಮ ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣರಂಥ ವೀರರ ಬಗ್ಗೆ ಉದ್ದುದ್ದು ಭಾಷಣ ಬೀಗಿಯುವ ನಮ್ಮ ಸಾಹಿತಿಗಳು ಇದುವರೆಗೆ ಒಂದು ಸಣ್ಣ ಹೇಳಿಕೆಯೂ ನೀಡದೆ ಇರುವುದು ಬೆಳಗಾವಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ದುರಂತದ ಅವಮಾನಕರ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, "ಅಸ್ಮತೆ"ಗಾಗಿ ಮಾತನಾಡಿದ ಅಶೋಕ ಚಂದರಗಿ ಅವರ ಮಾತುಗಳು ಸಾಕ್ಷಿ ಒದಗಿಸುತ್ತವೆ.
ನಿಮಗೆಲ್ಲಿಯಾದರೂ ಈ ಸಾಹಿತಿಗಳು ಕಂಡರೆ ದಯವಿಟ್ಟು ತಿಳಿಸಿ!
***
ಈ ಲೇಖನ ಹಂಚಿಕೊಳ್ಳಿ