ಶರಣರ ಬಯಲು ಸಿದ್ಧಾಂತವನ್ನು ಬಯಲಲ್ಲಿ ಬಯಲಾಗಿಸಿದ ಸಾವಿರ ಕಂಠಗಳು
"ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿರುವ ಸಂದರ್ಭದಲ್ಲಿ ಶರಣರ ವಚನ ಗಾಯನ ಒಂದು ಅಮೋಘ ಸಾಂಕೇತಿಕತೆಯಾಗಿದೆ. ಇಡೀ ಜಗತ್ತು ಇಂದು ಯುದ್ದ, ಅಶಾಂತಿ, ಮಾನವೀಯ ಮೌಲ್ಯಗಳ ಕುಸಿತದಿಂದ ಕತ್ತಲೆ ಆವರಿಸಿದೆ. ಇದಕ್ಕೆ ಬಸವಣ್ಣಾದಿ ಶರಣರ ಮನುಷ್ಯಪರವಾದ ಬೆಳಕು ಕತ್ತಲೆಯನ್ನು ದೂರಿ ಸರಿಸುವ ಸಾಮರ್ಥ್ಯ ಹೊಂದಿದೆ..."
ಶರಣರ ಬಯಲು ಸಿದ್ಧಾಂತವನ್ನು ಬಯಲಲ್ಲಿ ಬಯಲಾಗಿಸಿದ ಸಾವಿರ ಕಂಠಗಳು
**
ಬಸವಣ್ಣ ಆದಿಯಾಗಿ 12 ನೇ ಶತಮಾನದ ಶಿವ ಶರಣರು ಮನುಷ್ಯಪರವಾಗಿ ಪ್ರತಿಪಾದಿಸಿ, ಬದುಕಿ ತೋರಿಸಿದ ಬಯಲು ಸಿದ್ಧಾಂತವನ್ನು ಬೆಳಗಾವಿ ಕೆ.ಎಲ್.ಇ. ವಿಶ್ವವಿದ್ಯಾಲಯದ ಬಯಲಿನಲ್ಲಿ ಸಾವಿರ ಕಂಠಗಳ ಮಧುರವಾದ ಗಾಯನದ ವಚನೋತ್ಸವ ಎಲ್ಲರ ಮನಸ್ಸನ್ನು ಬಯಲಾಗಿಸಿತು.
ಇಂದು ಸಂಧ್ಯಾರಾಗದ ಸಮಯದಲ್ಲಿ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ, ಸಂಸ್ಥೆಯ ಕನ್ನಡ ಬಳಗ ಮತ್ತು ಸಂಗೀತ ಮಹಾವಿದ್ಯಾಲಯದ ಸಹಯೋಗದಲ್ಲಿ ಡೀಮ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಬಸವಣ್ಣ ಸೇರಿದಂತೆ ಶರಣರ ಆಯ್ದ ವಚನಗಳ ಗಾಯನ ವಚನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಧುರವಾದ ಗಾಯನದಲ್ಲಿ ಸಂಸ್ಥೆಯ ವಿವಿಧ ಅಂಗಗಳ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು ಒಂದುಗೂಡಿ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು.
ಈ ಮೊದಲು ಶಿವಮೊಗ್ಗದಲ್ಲಿ ಆಯೋಜಿಸಿದ ವಚನ ಗಾಯನ ಮಾದರಿಯನ್ನಾಗಿರಿಸಿಕೊಂಡು ಇಲ್ಲಿ ಆಯೋಜಿಸಲಾಗಿತ್ತು. ಖ್ಯಾತ ಗಾಯಕ ದಿವಂಗತ ಸಿ. ಅಶ್ವಥ್ ಅವರು ರಾಗ ಸಂಯೋಜಿಸಿ ಹಾಡಿದ ಮಾದರಿಯನ್ನು ಅನುಸರಿಸಿ ವಚನಗಳನ್ನು ಗಾಯನ ಮಾಡಲಾಯಿತು. 8 ವರ್ಷದ ಮಗು ಒಳಗೊಂಡು 80 ವರ್ಷದ ವೃದ್ಧರವರಿಗೆ ಈ ಸಮೂಹಗಾನದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಸಂಗೀತ ಮಹಾವಿದ್ಯಾಲಯದ ಶಿಕ್ಷಕರು ಕಳೆದ ಮೂರು ತಿಂಗಳುಗಳಿಂದ ನಿರಂತರ ಶ್ರಮ ವಹಿಸಿ ಸಮೂಹ ಗಾಯನವನ್ನು ಸಿದ್ಧಪಡಿಸಿ ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಭಾಕರ ಕೋರೆ ಶ್ಲಾಘನೆ:
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡೀಮ್ಡ್ ವಿವಿ ಕುಲಾಧಿಪತಿ ಪ್ರಭಾಕರ ಕೋರೆ ವಚನಗಾಯದ ಮಾಧುರ್ಯಕ್ಕೆ ಮನಸೋತು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮುಂದುವರಿಸುವ ಭರವಸೆ ನೀಡಿದರು. 12 ನೆಯ ಶತಮಾನದಲ್ಲಿಯೇ ಬಸವಣ್ಣನವರು ಅನುಭವ ಮಂಟಪದ ಸಂಸತ್ತಿನ ಮೂಲಕ ಜಾತಿ, ವರ್ಗ, ವರ್ಣ ಭೇದದ ವಿರುದ್ಧ ಧ್ವನಿ ಎತ್ತಿ ಸಮಾನತೆ ಕಲ್ಪಿಸಿದವರು. ಅಂದು ಪುರುಷರ ಸಮಾನವಾಗಿ ಮಹಿಳೆಯರಿಗೆ ಸಮಾನತೆ ನೀಡಿದರು ಎಂದು ತಿಳಿಸಿದರು.
ಮೌಲ್ಯಗಳ ಕುಸಿತದ ಜಗತ್ತಿನ ಕತ್ತಲೆಗೆ ಶರಣರ ಬೆಳಕು:
ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿರುವ ಸಂದರ್ಭದಲ್ಲಿ ಶರಣರ ವಚನ ಗಾಯನ ಒಂದು ಅಮೋಘ ಸಾಂಕೇತಿಕತೆಯಾಗಿದೆ. ಇಡೀ ಜಗತ್ತು ಇಂದು ಯುದ್ದ, ಅಶಾಂತಿ, ಮಾನವೀಯ ಮೌಲ್ಯಗಳ ಕುಸಿತದಿಂದ ಕತ್ತಲೆ ಆವರಿಸಿದೆ. ಇದಕ್ಕೆ ಬಸವಣ್ಣಾದಿ ಶರಣರ ಮನುಷ್ಯಪರವಾದ ಬೆಳಕು ಕತ್ತಲೆಯನ್ನು ದೂರಿ ಸರಿಸುವ ಸಾಮರ್ಥ್ಯ ಹೊಂದಿದೆ ಎಂದು ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕಮಂಗಳೂರು ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗದ ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮಿಜಿ ಸಂಧ್ಯಾರಾಗದ ವಚನೋತ್ಸವ ಸಾಂಕೇತಿಕರಿಸಿ ನುಡಿದರು.
ಲಿಂಗಾಯತರು ಬಸವಣ್ಣನವರನ್ನು ತಮ್ಮ ಹಿಡಿತದಿಂದ ಬಿಡಿಸಿ ಜನಸಾಮಾನ್ಯರ ಮಧ್ಯ ಒಪ್ಪಿಸುವ ಪ್ರಕ್ರಿಯೆ ನಡೆಯಬೇಕಾಗಿದ್ದು, ವಚನೋತ್ಸವ ಇದಕ್ಕೆ ಪೂರಕವಾದ ಕಾರ್ಯಕ್ರಮ. ಲಿಂಗಾಯತರು ಬಸವಣ್ಣನವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಕಾರಣ ಅಂಬೇಡ್ಕರ್ ಅವರು ಲಿಂಗಾಯತ ಧರ್ಮ ಸ್ವೀವಕರಿಸಲು ನಿರಾಕರಿಸಿ ಬೌದ್ಧ ಧರ್ಮ ಸ್ವೀಕರಿಸಿದರು. ಹೀಗಾಗಿ ಬಸವಣ್ಣನವರನ್ನು ಮುಕ್ತಗೊಳಿಸಿ ಬಯಲಾಗಿಸುವ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೆ. ಎಲ್.ಇ. ಸಂಸ್ಥೆಯ ಅನೇಕ ಗಣ್ಯರು, ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
***
ಈ ಲೇಖನ ಹಂಚಿಕೊಳ್ಳಿ