ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸಿರುವ ಯುವಕರ ಭವಿಷ್ಯದ ದೃಷ್ಟಿಯಿಂದ, ಅರ್ಹ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಸ್ಮಿತೆ ಸುದ್ದಿ : ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಜೊತೆಗೆ, ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿನ ವಿವರಗಳ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಸ್ತುತ ಚಾಲ್ತಿಯಲ್ಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-07-2026 ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 04-07-2026 ಎಂದು ನಿಗದಿ ಪಡಿಸಲಾಗಿತ್ತು.
ತಾಂತ್ರಿಕ ಸಮಸ್ಯೆಗಳು, ಪ್ರಮಾಣ ಪತ್ರಗಳನ್ನು ಪಡೆಯಲು ವಿಳಂಬ ಹಾಗೂ ಇತರೆ ಅನೇಕ ಕಾರಣಗಳಿಂದ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಈಗಾಗಲೇ ಸಲ್ಲಿಸಿದ ಅರ್ಜಿಗಳಲ್ಲಿ ತಪ್ಪಾದ ಮಾಹಿತಿಗಳನ್ನು ನಮೂದಿಸಿದ ಹಿನ್ನಲೆಯಲ್ಲಿ, ಅರ್ಜಿಗಳಲ್ಲಿನ ವಿವರಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡಬೇಕು ಎಂದು ಕೆಲವು ಅಭ್ಯರ್ಥಿಗಳು ಮನವಿ ಮಾಡಿದ್ದರು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸಿರುವ ಯುವಕರ ಭವಿಷ್ಯದ ದೃಷ್ಟಿಯಿಂದ, ಅರ್ಹ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅವರು,ಅಭ್ಯರ್ಥಿಗಳ ಅನುಕೂಲತೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಇರುವ ಕೊನೆಯ ದಿನಾಂಕವನ್ನು 08 ಜುಲೈ, 2026ರ ಸಂಜೆ 4.00 ಗಂಟೆಯವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ತಿದ್ದುಪಡಿ ಮಾಡಲು 09 ಜುಲೈ, 2026 ರಿಂದ 12 ಜುಲೈ, 2026 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ 3,395 ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ 596 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಯೋಗದಲ್ಲಿ ನೇಮಕಾತಿ ನಡೆಸಲಾಗುತ್ತಿದೆ. ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಈಗಾಗಲೇ 2,80,216 ಅರ್ಜಿಗಳು ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ 59,309 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದು ರಾಜ್ಯದ ಯುವಜನರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಉತ್ಸಾಹ ಹೆಚ್ಚಿರುವುದನ್ನು ಹಾಗೂ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಮೇಲೆ ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
**
ಈ ಲೇಖನ ಹಂಚಿಕೊಳ್ಳಿ