ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಆಧುನಿಕ ತಾಂತ್ರಿಕ ನಾವೀನ್ಯತೆ ಪ್ರಯೋಗಾಲಯ ಅವಶ್ಯ : ಪ್ರೊ.ಟಿ.ಜಿ.ಸೀತಾರಾಂ
ದೇಶದಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಪ್ರವೇಶ ಬಯಸುತ್ತಿರುವ ೪.೫ ಕೋಟಿ ವಿದ್ಯಾರ್ಥಿಗಳ ಪೈಕಿ ಶೇ.೨೮ ವಿದ್ಯಾರ್ಥಿಗಳು ಮಾತ್ರವೇ ಎಂಜಿನಿಯರಿಂಗ್ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ೪ ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ತಂತ್ರಜ್ಞಾನ ವೇಗಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ
ಅಸ್ಮಿತೆ ವರದಿ, ಅ.೧೯: ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ದೊರೆಯಬೇಕಾದರೆ ಆಧುನಿಕ ತಾಂತ್ರಿಕ ನಾವೀನ್ಯತೆಯ ಪ್ರಯೋಗಾಲಯಗಳ ಅವಶ್ಯಕತೆ ಅಗತ್ಯವಿದೆ. ವಿಟಿಯು ಪ್ರಾರಂಭಿಸಿದ ನೂತನ ನಾವೀನ್ಯತೆಯ ಪ್ರಯೋಗಾಲಯಗಳಲ್ಲಿ ಎಲ್ಲ ವಿಭಾಗದ ವಿದ್ಯಾರ್ಥಿಗಳು ಕಲಿಯುವ ಅವಕಾಶವಿದೆ. ಈ ಬಗೆಯ ಪ್ರಾಯೋಗಿಕ ಅಧ್ಯಯನದ ಪದವಿ ಪೂರೈಯಿಸಿ ಉದ್ಯೋಗಕ್ಕೆ ಸಿದ್ಧರಾಬೇಕು ಎಂದು ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಮಾಜಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ ಹೇಳಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂದು "ರೀವರ್ಸ್ ಎಂಜಿನಿಯರಿಂಗ್ ಮತ್ತು ಎಐಸಿಟಿಇ ಐಡಿಯಾ ಲ್ಯಾಬ್, ಸ್ನೈಡರ್ ಎಲೆಕ್ಟ್ರಿಕ್ ಲ್ಯಾಬ್" ಸೇರಿ ಮೂರು ನೂತನ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ನಿತ್ಯ ಬದಲಾವಣೆಯೊಂದಿಗೆ ಇಂದು ವೇಗವಾಗಿ ಬೆಳೆಯುತ್ತಿದ್ದು, ಇಂದು ಇದ್ದದ್ದು ನಾಳೆ ಇರೋದಿಲ್ಲ. ತಾಂತ್ರಿಕತೆಯ ಈ ವೇಗದ ಬದಲಾವಣೆಗೆ ಕೌಶಲ್ಯ ಆಧಾರಿತ ಪ್ರತಿಭೆಗಳ ಅವಶ್ಯವಾಗಿರುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗೆ ಸೀಮಿತಗೊಳ್ಳದೆ ಅಗತ್ಯವಾದ ನೂತನ ಕೌಶಲ್ಯವನ್ನು ರೂಢಿಗೊಳಿಸಿಕೊಳ್ಳುವುದು ಹೆಚ್ಚು ಅಗತ್ಯವಿದೆ ಎಂದರು
ದೇಶದಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಪ್ರವೇಶ ಬಯಸುತ್ತಿರುವ ೪.೫ ಕೋಟಿ ವಿದ್ಯಾರ್ಥಿಗಳ ಪೈಕಿ ಶೇ.೨೮ ವಿದ್ಯಾರ್ಥಿಗಳು ಮಾತ್ರವೇ ಎಂಜಿನಿಯರಿಂಗ್ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ೪ ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ತಂತ್ರಜ್ಞಾನ ವೇಗಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ.
ಮುದ್ದೇನಹಳ್ಳಿ ಕ್ಯಾಂಪಸ್‌ನಲ್ಲಿಯೂ ರೀವರ್ಸ್ ಎಂಜಿನಿಯರಿಂಗ್ ಲ್ಯಾಬ್:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, “ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸೆಂಟರ್ ಆಫ್ ಎಕ್ಸಲೆನ್ಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. ರೀವರ್ಸ್ ಎಂಜಿನಿಯರಿಂಗ್ ಲ್ಯಾಬ್ ಅನ್ನು ಮುಂದಿನ ದಿನಗಳಲ್ಲಿ ಮುದ್ದೇನಹಳ್ಳಿ ಕ್ಯಾಂಪಸ್‌ನಲ್ಲಿಯೂ ಆರಂಭಿಸಲಾಗುವುದು. ದಿನದ ೨೪ ಗಂಟೆ ಲ್ಯಾಬ್ ತೆರೆಯಲಿದ್ದು, ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವ ವೇಳೆಯಲ್ಲಿ ಆಗಮಿಸಿ ಅಧ್ಯಯನ ಮಾಡಬಹುದಾಗಿದೆ" ಎಂದರು.

"ಇಂದು ಉದ್ಯೋಗವಕಾಶಗಳ ಕೊರತೆ ಇಲ್ಲ. ಬದಲಾಗಿ ಕೈಗಾರಿಕೆಗಳು ಬಯಸುವ ರೀತಿಯಲ್ಲಿ ವಿದ್ಯಾರ್ಥಿಗಳು ಸಿದ್ಧರಾಗುತ್ತಿಲ್ಲ ಎಂಬ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಈ ಸಮಸ್ಯೆಯನ್ನು ನೀಗಿಸುವ ಸಲುವಾಗಿ ನಾವು ಈ ಲ್ಯಾಬ್‌ಗಳನ್ನು ತೆರೆದಿದ್ದೇವೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಬಹುದು. ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವಿವಿಧ ಕ್ಷೇತ್ರದಲ್ಲಿ ಲ್ಯಾಬ್‌ಗಳಿವೆ. 3ಡಿ ಪ್ರಿಟಿಂಗ್ ಮಿಷನ್, ಡಿಸೈನಿಂಗ್, ನವ ತಂತ್ರಜ್ಞಾನವನ್ನು ಒಳಗೊಂಡಿದೆ" ಎಂದು ಪ್ರೊ. ವಿದ್ಯಾಶಂಕರ ತಿಳಿಸಿದರು.
ಐ ವ್ಯಾಲ್ಯೂ ಸಿಟಿಒ ಅರುಣ್ ಕುಮಾರ್, ವಿಟಿಯು ಕಾರ್ಯಕಾರಿ ಪರಿಷತ್‌ನ ಸದಸ್ಯ ಪ್ರೊ.ವಿ.ಕೇಶವ ಮೂರ್ತಿ, ವಿಟಿಯು ಕುಲಸಚಿವ(ಆಡಳಿತ) ಪ್ರೊ.ಪ್ರಸಾದ ಬಿ.ರಾಂಪುರೆ, ಮೌಲ್ಯಮಾಪನ ವಿಭಾಗ ಕುಲಸಚಿವ ಪ್ರೊ.ಯು.ಜೆ.ಉಜ್ವಲ್, ವಿತ್ತಾಧಿಕಾರಿ ಡಾ.ಜಿ.ಪ್ರಶಾಂತ್ ನಾಯಕ್, ವಿಟಿಯು ಅಭಿವೃದ್ಧಿ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಕೆ.ಎನ್.ಭರತ್ ಸೇರಿದಂತೆ ಇತರರು ಭಾಗವಹಿಸಿದ್ದರು.
***
ಈ ಲೇಖನ ಹಂಚಿಕೊಳ್ಳಿ