ಕಾರ್ಮಿಕರ ಕನಿಷ್ಠ ವೇತನ ಹಂತಹಂತವಾಗಿ ಹೆಚ್ಚಿಸಲು ವಿರೋಧವಿಲ್ಲ
ಕನಿಷ್ಠ ವೇತನ ಹೆಚ್ಚಳ ವಿರೋಧಿಸಿ ಬೆಳಗಾವಿಯಲ್ಲಿ ಇಂದು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಂಘಟನೆಗಳ ಸದಸ್ಯರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ
ಕಾರ್ಮಿಕರ ಕನಿಷ್ಠ ವೇತನ ಹಂತಹಂತವಾಗಿ ಹೆಚ್ಚಿಸಲು ವಿರೋಧವಿಲ್ಲ : ನಾಗರಮುನೋಳಿ
ಈಗಾಗಲೇ ಉದ್ಯಮಗಳು ಬೆಲೆ ಏರಿಕೆಯಿಂದ ತತ್ತರಿಸಿವೆ. ಪುನಃ ಕನಿಷ್ಠ ವೇತನವನ್ನು ಹೆಚ್ಚಿಸಿದರೆ ಬಹಳಷ್ಟು ಉದ್ಯಮಗಳು ಬಾಗಿಲು ಮುಚ್ಚಲಿವೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ಉಲ್ಬಣವಾಗಲಿದೆ. ಯಾವುದೇ ಕಾರಣಕ್ಕೂ ಕನಿಷ್ಠ ವೇತನ ನಿಯಮವನ್ನು ಜಾರಿಗೆ ತರಬಾರದು ಎಂದು ಒಕ್ಕೋರಲಿನಿಂದ ವಿರೋಧಿಸಿರುವ ಬೆಳಗಾವಿ ಉದ್ಯಮಿದಾರರು ಕನಿಷ್ಠ ವೇತನವನ್ನು ಹಂತ ಹಂತವಾಗಿ ಹೆಚ್ಚಿಸುವುದಕ್ಕೆ ನಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡೆಸಿದ್ದಾರೆ.
ಕನಿಷ್ಠ ವೇತನ ಹೆಚ್ಚಳ ವಿರೋಧಿಸಿ ಬೆಳಗಾವಿಯಲ್ಲಿ ಇಂದು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಂಘಟನೆಗಳ ಸದಸ್ಯರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮನೋಳಿ, ಒಮ್ಮೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದು ಉದ್ಯಮಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಕನಿಷ್ಠ ವೇತನ ಹೆಚ್ಚಳದಿಂದ ವ್ಯಾಪಾರ, ಕೈಗಾರಿಕೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪಕ್ಕದ ರಾಜ್ಯಗಳಲ್ಲಿ ಕನಿಷ್ಠ ವೇತನ ಅತ್ಯಂತ ಕಡಿಮೆ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಉದ್ಯಮಗಳ ಉಳಿವಿಗೆ ಯಾವುದೇ ಸಹಾಯ ಮಾಡದೆ ಈ ರೀತಿ ವೇತನ ಹೆಚ್ಚಿಸುವುದರಿಂದ ಇಡೀ ಉದ್ಯಮವಲಯಕ್ಕೆ ಆಘಾತವಾಗಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಉದ್ಯಮಿಗಳ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿಯೂ, ಶೀಘ್ರವೇ ನೂತನವಾಗಿ ನೇಮಕವಾಗಲಿರುವ ಕಾರ್ಮಿಕ ಸಚಿವರು ಹಾಗೂ ಕೈಗಾರಿಕಾ ಸಚಿವರ ಜೊತೆ ಸಭೆಯನ್ನು ಆಯೋಜಿಸಲು ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದರು.
ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಸತೀಶ್ ಕುಲಕರ್ಣಿ, ವಾಣಿಜ್ಯೋದ್ಯಮ ಸಂಘದ ಎಲ್ಲಾ ಪದಾಧಿಕಾರಿಗಳು, ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು, ನಗರದ ವಿವಿಧ ಉದ್ಯಮಗಳ ನೂರಾರು ಪ್ರತಿನಿಧಿಗಳು ಸೇರಿದಂತೆ ಬೇರೆ ಬೇರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
**
ಈ ಲೇಖನ ಹಂಚಿಕೊಳ್ಳಿ