ನೆರೆಯ ಇತರ ರಾಜ್ಯಗಳ ಸಹಯೋಗದ ಮೂಲಕ ಕಬ್ಬಿನ ಬೆಲೆ ನಿಗದಿಗೆ ಕೇಂದ್ರದ ಮೇಲೆ ಒತ್ತಡ ತರಲಾಗುವುದು - ಡಿಕೆಶಿ
ಅಸ್ಮಿತೆ ವರದಿ, ಅ.೧೭: ಒಂದು ಟನ್ ಕಬ್ಬಿಗೆ 5,500 ರೂಪಾಯಿ ಬೆಲೆ ನೀಡಬೇಕೆಂದು ಕಳೆದ ಕೆಲವು ದಿನಗಳಿಂದ ರೈತರು ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಹೋರಾಟ ಮಾಡುತ್ತಿದ್ದು, ಒಂದು ವಾರದಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ಪ್ರತಿಭಟನಾ ನಿರತ ರೈತರನ್ನು ಇಂದು ಸಂಜೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭೆಟ್ಟಿಯಾದರು. ಇದಕ್ಕೂ ಮುಂಚೆ ಕಿತ್ತೂರು ವೃತ್ತದಲ್ಲಿ ರಾಣಿ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಸಹಕಾರ ಸಚಿವ ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ಸಂತೋಷ ಲಾಡ್, ಶಾಸಕ ರಾಜು ಸೇಠ, ಮಾಜಿ ಸಚೇತಕ ಅಶೋಕ ಪಟ್ಟಣ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಅನೇಕ ಜನಪ್ರತಿಗಳು ಉಪಸ್ಥಿತರಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರನ್ನು ಅನಂತರ ಮಾತನಾಡಿದ ಡಿ.ಕೆ. ಶಿವಕುಮಾರ, "ರೈತರ ಸಮಸ್ಯೆಗಳ ಆಲಿಸಲು ಸಚಿವರ ತಂಡದೊಂದಿಗೆ ಅಗಿಸಿದ್ದೇನೆ. ಕಬ್ಬಿನ ಬೆಲೆ ನಿಗದಿ, ರೈತರ ಸಮಸ್ಯೆ ಮಾತ್ರವಲ್ಲ, ಕೇಂದ್ರ, ರಾಜ್ಯ ಹಾಗೂ ಕಾರ್ಖಾನೆ ಗಳ ಸಮಸ್ಯೆ ಯು ಆಗಿದೆ. ಬೆಲೆ ಏರಿಕೆ ಹಾಗು ಬೀಕರ ಬರಗಾಲದ ಮಧ್ಯ ರೈತರ ಸಮಸ್ಯೆ ಅರ್ಥವಾಗಿದೆ. ಕಬ್ಬಿನ ಸೂಕ್ತ ಬೆಲೆ ನಿಗದಿಗೆ ನೆರೆಯ ರಾಜ್ಯಗಳಾದ ಕೆರಳ, ತಮಿಳನಾಡು, ಆಂಧ್ರ, ಮಹಾರಾಷ್ಟ್ರ ಸರ್ಕಾರಗಳೊಂದಿಗೆ ಮಾತನಾಡಿ ಎಲ್ಲರೂ ಸೇರಿ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು" ಎಂದು ತಿಳಿಸಿದರು.
ಸಮಸ್ಯೆ ಪರಿಹಾರಕ್ಕೆ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಯವರನ್ನು ಭೆಟ್ಟಿ ಮಾಡಿ ಸಮಸ್ಯೆಯ ಕುರಿತು ಸಮಾಲೋಚಿಸಿ, ಸೂಕ್ತ ಪರಿಹಾರಕ್ಕೆ ಒತ್ತಡ ತರಲಾಗುವುದು. ಈ ಸಂದರ್ಭದಲ್ಲಿ ರೈತ ಮುಖಂಡರು , ಕಾರ್ಖಾನೆಯ ಮಾಲಿಕರು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಸಂಬಂಧಿಸಿದ ಅಧಿಕಾರಿಗಳಿಗೂ ಕರೆದುಕೊಂಡು ಹೋಗಿ, ಪರಿಹಾರ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ರೈತ ಹೋರಾಟದ ಮುಖಂಡ ಚೂನಪ್ಪ ಪೂಜಾರಿ,"ಬೇಡಿಕೆ ಈಡೇರುವವರೆಗೂ ರೈತರ ಹೋರಾಟ ಮುಂದುವರೆಯುತ್ತದೆ. ನಾಳೆ ಹುಬ್ಬಳ್ಳಿಯತ್ತ ಕಾಲ್ನಡಿಗೆ ಮೆರವಣಿಗೆ ನಡೆಸಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು" ಎಂದು ತಿಳಿಸಿದ್ದಾರೆ.
***
ಈ ಲೇಖನ ಹಂಚಿಕೊಳ್ಳಿ