ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ 108ನೇ ಶರಕತ್ ದಿನಾಚರಣೆ
ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ 108ನೇ ಶರಕತ್ ದಿನಾಚರಣೆ
ಅಸ್ಮಿತೆ ವರದಿ, ಅ.೩೦: ಬೆಳಗಾವಿಯ ಮರಾಠಾ ಲಘು ಪದಾತಿದಳ MLIRC ಕೇಂದ್ರದಲ್ಲಿ ಗುರುವಾರ ದಿ. 29 ರಂದು 108ನೇ ಶರಕತ್ ವಿಜಯ ದಿವಶವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
1918ರ ಮೆಸೊಪೊಟೇಮಿಯಾ ಯುದ್ಧ ಕಾರ್ಯಾಚರಣೆಯಲ್ಲಿ ಅಪ್ರತಿಮ ಶೌರ್ಯ ಮೆರೆದ 114 ಮರಾಠಾ ಸೈನಿಕರ ಸಾಹಸಮಯ ಹೋರಾಟ, ತ್ಯಾಗ ಮತ್ತು ಬಲಿದಾನದ ಯುದ್ಧದಲ್ಲಿ ಲಭಿಸಿದ ಜಯದ ಸ್ಮರಣಾರ್ಥ‘ಶರಕತ್’ ದಿವನ್ನಾಗಿ MLIRC ಆಚರಿಸುತ್ತದೆ.

MLIRCಯ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ ಕೇಂದ್ರದಲ್ಲಿನ ಶರಕತ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಹುತಾತ್ಮ ವೀರರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ನಡೆದ ವಿಶೇಷ ಸೈನಿಕ ಸಮ್ಮೇಳನದಲ್ಲಿ ಸೇವೆಯಲ್ಲಿರುವ ಸೈನಿಕರು, ಅಗ್ನಿವೀರರು ಹಾಗೂ ಮಾಜಿ ಸೈನಿಕರೊಂದಿಗೆ ಸಂವಾದ ನಡೆಸಿದರು.
ಹಿಂದವಿ ಸ್ವರಾಜ್ಯದ ಕಾಲಘಟ್ಟದಲ್ಲಿ ಮರಾಠಾ ಸೇನೆಯ ಸರಸೇನಾಪತಿಯಾಗಿ ಸೇವೆ ಸಲ್ಲಿಸಿದ್ದ ಶ್ರೀ ಹಂಬೀರರಾವ್ ಮೊಹಿತೆ ಅವರ ಪುತ್ಥಳಿಯನ್ನು ಕಮಾಂಡೆಂಟ್ ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಹಾನ್ ಸೇನಾನಿಯ ವಂಶಸ್ಥರಾದ ಶ್ರೀ ವಿಕ್ರಮ್‌ಸಿಂಹ ಮೊಹಿತೆ ಉಪಸ್ಥಿತರಿದ್ದರು. ಅವರು ಈ ಪುತ್ಥಳಿಯನ್ನು ರೆಜಿಮೆಂಟಲ್ ಸೆಂಟರ್‌ಗೆ ಕೊಡುಗೆಯಾಗಿ ನೀಡಿದರು. ಇದೇ ವೇಳೆ ತಳೇಕರ್ ಡ್ರಿಲ್ ಸ್ಕ್ವೇರ್‌ನಲ್ಲಿ ‘ಸಲ್ಯೂಟಿಂಗ್ ಫ್ರೇಮ್’ ಅನ್ನು ಉದ್ಘಾಟಿಸಲಾಯಿತು.

ಸಂಜೆ ನಡೆದ ಬಾರಾಖಾನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಬ್ರಿಗೇಡಿಯರ್ ಗಿರೀಶ್ ಉಪಾಧ್ಯ ಅವರ ಪತ್ನಿ ವೇಧಾ ಉಪಾಧ್ಯ ಹಾಗೂ MLIRCಯ ಹಿರಿಯ ಅಧಿಕಾರಿಗಳ ಕುಟುಂಬ ವರ್ಗದವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ನಂತರ ಗಿರೀಶ್ ಉಪಾಧ್ಯ ಹಾಗೂ ಇತರ ಅಧಿಕಾರಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿ ಚಾಲನೆ ನೀಡಿದರು.
ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬದ ಹಲವಾರು ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮವು ಸೌಹಾರ್ದ, ಒಗ್ಗಟ್ಟು ಮತ್ತು ರೆಜಿಮೆಂಟಿನ ಹೆಮ್ಮೆಯ ಪ್ರತೀಕವಾಗಿ ಗಾಯನ, ನೃತ್ಯ, ನಾಟ್ಯ, ನಾಟಕ, ಶಿವಾಜಿ ಮಹಾರಾಜರ ಸಾಹಸ ದೇಶಪ್ರೇಮ ಬಿಂಬಿತ ಪ್ರದರ್ಶನಗಳು ವಿಶೇಷ ಗಮನ ಸೆಳೆದವು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ,108ನೇ ಶರಕತ್ ದಿನಾಚರಣೆ ಸುವರ್ಣಾಕ್ಷರದಿಂದ ಬರೆಯಲ್ಪಟ್ಟ ಐತಿಹಾಸಿಕ ದಿನವಾಗಿದೆ. ಮೊದಲಬೆಯ ಮಹಾಯುದ್ದದಲ್ಲಿ ಮರಾಠಾ ಲೈಟ್ ಇನ್‌ಫೆಂಟ್ರಿಯ ಯೋಧರು ತೋರಿದ

ಶೌರ್ಯ, ನಿಸ್ವಾರ್ಥ ಸೇವೆ ಮತ್ತು ಕರ್ತವ್ಯನಿಷ್ಠೆ ಬ್ರಿಟಿಷ್ ಅಧಿಕಾರಿಗಳಲ್ಲಿ ಬೆರಗು ಮೂಡಿಸಿತು. ಅಂದಿನ ಯೋಧರ ಹೋರಾಟ ಶಿವಾಜಿ ಮಹಾರಾಜರ ಹೋರಾಟದ ನೀತಿಯೇ ಮಾರ್ಗದರ್ಶನ ಹಾಗೂ ನಾಯಕತ್ವದ ಗುಣ ಸಾಬೀತುಗೊಳಿಸಿತು. ಯೋಧರ ಅಂದಿನ ಅಪ್ರತಿಮ ಹೊರಾಟ ಯಾವತ್ತೂ ಸ್ಮರಣೀಯ ಹಾಗೂ ಪ್ರೇರಣಾದಾಯಕವಾಗಿದೆ. ಈ ಆಚರಣೆಯು ಮುಂದಿನ ಪೀಳಿಗೆಯ ಸೈನಿಕರಿಗೆ ರೆಜಿಮೆಂಟಿನ ಗೌರವಯುತ ಪರಂಪರೆಯನ್ನು ಎತ್ತಿಹಿಡಿಯಲು ಮಾರ್ಗದರ್ಶಿಯಾದಿನಾಚರಣೆಯಗಿದೆ ಎಂದು ಹೇಳಿದರು.
***
ಈ ಲೇಖನ ಹಂಚಿಕೊಳ್ಳಿ